ಭೂಪರಿಷ್ಕರಣ

ಜೌಗು ನೆಲವನ್ನು ಕೃಷಿಯೋಗ್ಯ ಭೂಮಿಯಾಗಿ ಸುಧಾರಿಸುವುದನ್ನು ಭೂ ಪರಿಷ್ಕರಣ ಅಥವಾ ಲ್ಯಾಂಡ್ ರಿಕ್ಲಮೇಶನ್ ಎನ್ನುತ್ತಾರೆ. ಪ್ರಪಂಚದ ಎಷ್ಟೊ ಭಾಗಗಳಲ್ಲಿ ಫಲವತ್ತಾದ ಬಯಲುಗಳಲ್ಲಿ ತೇವ ಬಹಳ ಹೆಚ್ಚಾಗಿ ಅವು ಜೌಗು ಮತ್ತು ಚೌಳು ಮಣ್ಣುಗಳಾಗಿ ಅಥವಾ ನೀರಿಲ್ಲದೆ ಒಣಗಿ ಬೆಳೆ ತೆಗೆಯುವುದು ಅಸಾಧ್ಯ. ನೀರಾವರಿ, ಬಸಿಕಾಲುವೆ, ಪ್ರವಾಹ ನಿಯಂತ್ರಣ ಮುಂತಾದ ಸೌಲಭ್ಯ ಒದಗಿಸಿ ಈ ಜಮೀನುಗಳನ್ನು ವ್ಯವಸಾಯ ಯೋಗ್ಯವಾಗಿಸಬಹುದು.

	ಜೌಗುನೆಲದಲ್ಲಿ ಚರಂಡಿಗಳನ್ನು ತೋಡಿ ಅಧಿಕ ನೀರು ಹತ್ತಿರದ ಹಳ್ಳಕ್ಕೆ ಬಸಿದು ಹೋಗುವಂತೆ ಮಾಡಬಹುದು. ನೆಲ ಬಹಳ ತಗ್ಗಾಗಿದ್ದು ಇದು ಸಾಧ್ಯವಾಗದೇ ಹೋದರೆ ಸುತ್ತಲೂ ಒಳ್ಳೆಯ ಮಣ್ಣಿನ ಏರಿಗಳನ್ನು ಹಾಕಿ ಹೊಳೆಯಿಂದಲೋ ಸಮುದ್ರದಿಂದಲೋ ಅಲ್ಲಿಗೆ ನೀರು ನುಗ್ಗುವುದನ್ನು ತಡೆಯಬೇಕು. ಒಳಗಿನ ನೀರನ್ನು ತೆಗೆದ ಹೊರತು ಅಲ್ಲಿ ಪೈರು ಬೆಳೆಯದು. ಇದಕ್ಕಾಗಿ ಭೂಮಿಯ ಮಟ್ಟ ಅನುಸರಿಸಿ ಕಾಲುವೆಗಳನ್ನು ಸರಿಯಾದ ಅಂತರಗಳಲ್ಲಿ ತೋಡಿ ಆ ನೀರನ್ನು ಪಂಪುಗಳಮೂಲಕ ಹೊಳೆಗೆ ಅಥವಾ ಸಮುದ್ರಕ್ಕೆ ಹಾಯಿಸಬೇಕು. ಒಳಗಿನ ಪಾತಿಗಳ ನೀರಿನ ಮಟ್ಟ ಎತ್ತರವಾಗಿದ್ದರೆ ಅದನ್ನು ಕೆಳಕಾಲುವೆಗಳಿಂದ ತಗ್ಗಿಸಬಹುದು. ಈ ಪಾತಿಗಳಲ್ಲಿ ನೀರಿನ ಮಟ್ಟ ಬೇಸಗೆ ಮತ್ತು ಚಳಿಗಾಲಗಳಲ್ಲಿ ಬೇರೆ, ಬೇರೆಯಾಗಿರುತ್ತವೆ. ಎತ್ತರದ ಪ್ರದೇಶಗಳಿಂದ ಬರುವ ನೀರನ್ನು ನಾಲೆಗಳಲ್ಲಿ ಪಾತಿಗಳ ಏರಿಗಳ ಮೂಲಕ ಹೊಳೆಗೋ ಸಮುದ್ರಕ್ಕೋ ಒಯ್ಯಬಹುದು. ನೆಲದಿಂದ ಪಾತಿಯೊಳಕ್ಕೆ ಜಿನುಗುವ ನೀರೇ ವಿಶೇಷವಾಗಿರುತ್ತದೆ. ಏರಿಗಳು ಸಾಮಾನ್ಯವಾಗಿ ಉಂಗುರದ ಆಕಾರದಲ್ಲಿರುತ್ತವೆ. ಬೇಸಗೆಯಲ್ಲಿ ಸಮುದ್ರ ತೀರದಲ್ಲಿ ಸಿಹಿನೀರನ್ನು ಪಾತಿಯೊಳಕ್ಕೆ ಬಿಟ್ಟು ಅದರಲ್ಲಿ ಜಿನುಗುವ ನೀರಿನ ಉಪ್ಪು ಸೇರಿದಾಗ ಮತ್ತೆ ಆಗಾಗ ಸಿಹಿನೀರನ್ನು ಬಿಡಬೇಕಾಗುತ್ತದೆ. ಇಂಥ ಭೂಮಿಯಲ್ಲಿ ಪೈರನ್ನು ಬೆಳೆಸಲು ಇರುವ ದೊಡ್ಡತೊಂದರೆ ಎಂದರೆ ಸಮುದ್ರದಿಂದ ನೆಲದಲ್ಲಿ ಜಿನುಗಿ ಬರುವ ನೀರಿನಲ್ಲಿರುವ ಉಪ್ಪು; ಅಥವಾ ಹೊಳೆಯನೀರೇ ಆವಿಯಾಗಿ ಹೋಗಿ ಉಪ್ಪಿನ ಮೊತ್ತ ಹೆಚ್ಚಬಹುದು. ನೀರಿನಲ್ಲಿ ಕ್ಲೋರೀನಿನ ಅಂಶ ಅಧಿಕವಾದರೆ ಹಣ್ಣು, ತರಕಾರಿಗಳು ಚೆನ್ನಾಗಿ ಬೆಳೆಯುವುದಿಲ್ಲ.

	ಸಮುದ್ರತೀರದಲ್ಲಿ ಲವಣವಲ್ಲದೇ ನೆಲದ ಗುಣಕ್ಕೆ ಅನುಸಾರವಾಗಿ ಕರಿಯ ಕ್ಷಾರ ಇಲ್ಲವೆ ಬಿಳಿಯ ಕ್ಷಾರ ಮೇಲುಗಡೆ ಹರಡಿರುತ್ತದೆ. ಕರಿಯಕ್ಷಾರದಲ್ಲಿನ ಸೋಡಿಯಮ್ ಕಾರ್ಬೊನೇಟ್ ಮತ್ತು ಇತರೆ ಉಪ್ಪುಗಳು. ಜೈವಿಕ ಪದಾರ್ಥವನ್ನು ದಹಿಸುತ್ತವೆ. ಗಿಡಗಳ ಬೇರುಗಳನ್ನು ಕೊರೆಯುತ್ತವೆ. ಬಿಳಿಯ ಕ್ಷಾರದಲ್ಲಿ ಉಪ್ಪು ಸೋಡಿಯಮ್ ಸಲ್ಫೇಟ್, ಸೋಡಿಯಮ್ ನೈಟ್ರೇಟ್, ಮ್ಯಾಗ್ನೀಸಿಯಮ್ ಮತ್ತು ಕ್ಯಾಲ್ಸಿಯಮ್ ಸಲ್ಫೇಟುಗಳಿರುತ್ತವೆ. ಇವು ಕರಿಯ ಕ್ಷಾರದ ಹಾಗೆ ಗಿಡಗಳಿಗೆ ತೊಂದರೆ ಮಾಡುವುದಿಲ್ಲ. ಇವು ಹೆಚ್ಚಾಗಿದ್ದರೆ ಮಣ್ಣು ಕೊಂಚ ಉಬ್ಬಬಹುದು. ಇಂಥ ಜಮೀನು ವ್ಯವಸಾಯಕ್ಕೆ ಯ್ಯೋಗ್ಯವಾಗಬೇಕಾದರೆ ಈ ಕ್ಷಾರಗಳು ತೊಳೆದುಹೋಗಬೇಕು. ಶುದ್ಧವಾದ ನೀರೇ ನೆಲದ ಮೇಲೆ ಬಹುಕಾಲ ನಿಂತಿದ್ದರೆ ನೆಲದೊಳಗಿರುವ ಕ್ಷಾರಗಳು ಅದರಲ್ಲಿ ಕರಗಿ ನೀರು ಆವಿಯಾದ ಮೇಲೆ ಕ್ಷಾರಗಳು ನೆಲದಮೇಲೆ ನಿಲ್ಲುತ್ತವೆ. ಆಗ ನಾಲೆಯಿಂದ ನೀರನ್ನು ನೆಲದ ಮೇಲೇ ಹರಿಸಿ ಕ್ಷಾರಗಳು ಅದರೊಂದಿಗೆ ಕಾಲುವೆಗಳಲ್ಲಿ ಹರಿದುಹೋಗುವ ಹಾಗೆ ಮಾಡಬೇಕು. ಕೆಲವು ವರ್ಷಗಳ ಕಾಲ ಹೀಗೆ ನೀರಿನಿಂದ ತೊಳೆದ ಮೇಲೆ ಭೂಮಿ ಕೃಷಿ ಯೋಗ್ಯವಾಗುತ್ತದೆ.

	ಈಜಿಪ್ಟ್, ಮೆಸೊಪೊಟೇಮಿಯ, ಚೀನ ಮುಂತಾದ ಮುಂದುವರಿದಿದ್ದ ಪ್ರಾಚೀನ ದೇಶಗಳಲ್ಲಿ ಈ ನಿಟ್ಟಿನಲ್ಲಿ ಏನುಮಾಡಿದ್ದರೆಂಬುದು ಹೆಚ್ಚಾಗಿ ತಿಳಿದಿಲ್ಲ. ಚೀನೀಯರು ಕ್ರಿ. ಪೂ. 2300ರಲ್ಲಿಯೇ ಜಾಣತನದಿಂದ ಏರಿಗಳನ್ನು ಕಟ್ಟಿ ಭೂಮಿಯ ಮೇಲಿನ ನೀರನ್ನು ತಪ್ಪಿಸಿದ್ದರೂ ಜಿನುಗುವ ನೀರನ್ನು ಅಷ್ಟಾಗಿ ಗಮನಿಸಿರಲಿಲ್ಲ. ಭಾರತದಲ್ಲಿ ಅಡಿಕೆ, ತೆಂಗು ತೋಟಗಳಿಗೆ ಜಿನುಗುವ ನೀರಿನ ಉಪ್ಪಿನಿಂದ ಹೆಚ್ಚಿನ ತೊಂದರೆ ಇರಲಿಲ್ಲ. ತರಿ ಮತ್ತು ಖುಷ್ಕಿ ಭೂಮಿಗಳಲ್ಲಿ ಈ ಸಮಸ್ಯೆ ಉಲ್ಬಣಿಸಿರಲಿಲ್ಲ. ಬಿಳಿಯ ಕ್ಷಾರ ಮೇಲಕ್ಕೆ ಬಂದಿದ್ದ ಜಮೀನುಗಳನ್ನು ಬೀಳು ಬಿಡುತ್ತಿದ್ದರು. ಆದರೆ ಹೆಚ್ಚಿದ ಜನಸಂಖ್ಯೆಗೆ ಆಹಾರ ಒದಗಿಸಬೇಕಾಗಿರುವ ಈ ಕಾಲದಲ್ಲಿ ಭೂಪರಿಷ್ಕರಣ ಅವಶ್ಯವಾಗುತ್ತಿದೆ. ಪರಿಣಿತ ರೋಮನ್ನರೇ ಈ ಕೆಲಸಕ್ಕೆ ಕೈಹಾಕಿರಲಿಲ್ಲ. ಉತ್ತರ ಸಮುದ್ರದ ಆಗ್ನೇಯ ದಡದ ತಗ್ಗು ಭೂಮಿಯಲ್ಲಿ ವಾಸಿಸುತ್ತಿದ್ದ ಡಚ್ಚರನ್ನು ರೋಮನ್ನರು ಜೌಗಿನ ಜನರೆಂದು ಕರೆಯುತ್ತಿದ್ದರು. ಅವರು ವಾಸಕ್ಕೆ ಕೃತಕ ಗುಡ್ಡಗಳನ್ನು ಕಟ್ಟಬೇಕಾಗಿತ್ತು. ಈ ಜನ ಹಾಲೆಂಡಿನ ಉತ್ತರದ ಸಮುದ್ರವನ್ನೂ ಒಳನಾಡಿನ ಸರೋವರಗಳನ್ನೂ ಅಡ್ಡಕಟ್ಟೆ ಕಟ್ಟಿ ತಡೆದು 5200 ಚಕಿಮೀ ವಿಸ್ತೀರ್ಣದಿಂದ ನೀರನ್ನು ಎತ್ತಿ ಬೇಸಾಯ ಯೋಗ್ಯವಾಗಿ ಮಾಡಿದ್ದಾರೆ.

	1920ರಿಂದ ಈಚೆಗೆ ಹಾಲೆಂಡಿನ ಝೈಡರ್ ಝೀ ಯೋಜನೆಯಲ್ಲಿ ಒಳಗೆ ನುಗ್ಗಿರುವ ಸಮುದ್ರಕ್ಕೆ ಅಡ್ಡವಾಗಿ ಎರಡು ಅಡ್ಡಕಟ್ಟೆಗಳನ್ನು ಹಾಕಿ ಒಳಗಡೆ ಒಂದು ಸರೋವರವನ್ನು ನಿರ್ಮಿಸಿದ್ದಾರೆ. ಒಂದು ಕಟ್ಟೆ 32 ಕಿಮೀ ಉದ್ದವಿದ್ದರೆ ಇನ್ನೊಂದು 2.4 ಕಿಮೀ ಉದ್ದವಿದೆ. ಈ ಸರೋವರದ ಮೂರನೆಯ ಎರಡು ಭಾಗವನ್ನು ಕಾಲುವೆಗಳಿಂದ ವ್ಯವಸಾಯಯೋಗ್ಯವಾಗಿ ಮಾಡಿ ಉಳಿದ ತಗ್ಗಾದ ಭಾಗಕ್ಕೆ ಒಂದು ನದಿಯಿಂದ ನೀರನ್ನು ಬಿಟ್ಟು ಅದರಿಂದ ನೀರಾವರಿಗೆ ನೀರನ್ನು ಒದಗಿಸುತ್ತಿದ್ದಾರೆ. 1932ರಲ್ಲಿ 20,235 ಹೆಕ್ಟೇರ್ ಭೂಮಿಯಲ್ಲಿ ಬೆಳೆ ಬಿತ್ತಿದ್ದರು. ಹತ್ತುವರ್ಷಗಳ ಬಳಿಕ 48,560 ಹೆಕ್ಟೇರ್ ಜಮೀನು ಸಾಗುವಳಿಗೆ ಬಂತು. ಆಮೇಲೆ ಸರೋವರಕ್ಕೆ ಅಡ್ಡವಾಗಿ 90 ಕಿಮೀ ಉದ್ದನೆಯ ಏರಿ ಹಾಕಿ 50,590 ಹೆಕ್ಟೇರನ್ನು ಸಾಗುವಳಿಗೆ ತಂದರು. ಈಚೆಗೆ ಅಷ್ಟೇ ವಿಸ್ತೀರ್ಣದ ಇನ್ನೆರಡು ಬಯಲುಗಳು ಬೇಸಾಯಕ್ಕೆ ಬಂದಿವೆ. ಹೀಗೆ ಡಚ್ಚರು ವಿಸ್ತಾರವಾದ ಭೂಮಿಯನ್ನು ಸಮುದ್ರದಿಂದ ಕಸಿದುಕೊಂಡು ವ್ಯವಸಾಯ ಮುಂದುವರಿಸಿದ್ದಾರೆ. ಇವರು ತಮ್ಮ ದೇಶದಲ್ಲಿಯೇ ಅಲ್ಲದೆ ಬ್ರೆಮೆನ್, ವಿಶ್ಚುಲ ನದೀಮುಖ, ಪೋಲೆಂಡ್, ರಷ್ಯದ ಜೌಗುಭೂಮಿಗಳು, ಜರ್ಮನಿ, ಇಟಲಿ ಮತ್ತು ಇಂಗ್ಲೆಂಡಿನಲ್ಲಿ ಸಾವಿರಾರು ಜೌಗು ಪ್ರದೇಶಗಳಿಂದ ನೀರು ತೆಗೆದು ಅವನ್ನು ವ್ಯವಸಾಯಯೋಗ್ಯವಾಗಿಸಿದ್ದಾರೆ. ಕ್ರಿ.ಶ. 1600ಕ್ಕೆ ಮುಂಚೆ ಸಮುದ್ರಮಟ್ಟಕ್ಕಿಂತ ತಗ್ಗಾಗಿರುವ ಯಾವ ಸರೋವರದಿಂದಲೂ ನೀರನ್ನು ತೆಗೆಯಲಾಗುತ್ತಿರಲಿಲ್ಲ. ಲೀಗ್‍ವೆಟರ್ (1575-1650) ಎಂಬ ಯಂತ್ರಶಿಲ್ಪಿ 1640ರ ವೇಳೆಗೆ ಇಪ್ಪತ್ತೇಳು ಸರೋವರಗಳಿಂದ ನೀರನ್ನು ಎತ್ತಿದ.

	ಈ ಕೆಲಸದಲ್ಲಿ ಮೂರುಘಟ್ಟಗಳಿವೆ. ಮೊದಲು ಅಗಳುಗಳನ್ನು ತೋಡಿ ನೈಸರ್ಗಿಕವಾಗಿ ನೀರು ಕೆಳಕ್ಕೆ ಹರಿಯುವಂತೆ ಮಾಡುತ್ತಾರೆ. ಆಮೇಲೆ ಏರಿಗಳನ್ನು ಕಟ್ಟುತ್ತಾರೆ. ಮೂರನೆಯದಾಗಿ ಒಳಗಿನ ನೀರನ್ನು ಪಂಪುಗಳಿಂದ ಎತ್ತುತ್ತಾರೆ. ಯಂತ್ರಗಳನ್ನು ಪ್ರಾರಂಭದಲ್ಲಿ ಜಲಶಕ್ತಿಯಿಂದಲೂ ಆಮೇಲೆ ಗಾಳಿಯಿಂದ, ಕೊನೆಯದಾಗಿ ಆವಿಯಿಂದ ನಡೆಸಲಾಯಿತು. ಒಂದು ಏರಿ ಒಡೆದರೆ ನೀರು ಒಳ ನುಗ್ಗಿ ಬೆಳೆಗಳಿಲ್ಲದೆ ಕ್ಷಾಮ ತಲೆದೋರುತ್ತಿದ್ದುದರಿಂದ ಏರಿಯ ಕಟ್ಟಡಗಳ ವಿಚಾರವಾಗಿ ಕಟ್ಟುನಿಟ್ಟಾದ ಕಾನೂನುಗಳು ತಯಾರಾದುವು. ಆದರೂ ಎಷ್ಟೋ ಭೂಮಿ ಸಮುದ್ರದ ಪಾಲಾಗುತ್ತಿತ್ತು.

	ಇಂಗ್ಲೆಂಡಿನಲ್ಲಿ ಕೈಗಾರಿಕೆಯ ಪ್ರಗತಿಯ ಸಲುವಾಗಿ ಆಹಾರ ಪದಾರ್ಥಗಳನ್ನು ಅಗ್ಗವಾಗಿ ಆಮದು ಮಾಡಿಕೊಳ್ಳುತ್ತಿದ್ದರು. ಹೀಗಾಗಿ ಅನುಪಯುಕ್ತಭೂಮಿಯನ್ನು ಪರಿಷ್ಕರಿಸುವ ದರದು ಕಾಣಲಿಲ್ಲ. ಅಲ್ಲಿ ಜೌಗುನೆಲದ ಪರಿಷ್ಕರಣವನ್ನು ಜನ ಮೊದಲು ವಿರೋಧಿಸಿದರು. ಇದಕ್ಕಾಗಿ ಶ್ರಮಪಟ್ಟ ಯಂತ್ರಶಿಲ್ಪಿ ಎದೆಯೊಡೆದು ಬಡತನದಲ್ಲಿ ಪ್ರಾಣಬಿಟ್ಟ.. ಆದರೂ ಔಸ್ ಮತ್ತು ಅದರ ಉಪನದಿಗಳ ನೀರಿನಿಂದ ಜೌಗಾಗಿದ್ದ 8,09,925 ಹೆಕ್ಟೇರುಗಳಷ್ಟು ಫಲವತ್ತಾದ ಜಮೀನನ್ನು ಮೂರು ಶತಮಾನಗಳ ಪ್ರಯತ್ನದಿಂದ ಸಾಗುವಳಿಗೆ ತಂದಿದ್ದಾರೆ. ಈ ಜಾಗಕ್ಕೆ ಫೆನ್ಸ್ ಎಂದು ಹೆಸರು.

	ಯಂತ್ರಶಿಲ್ಪ: ಭೂಪರಿಷ್ಕರಣ ಯೋಜನೆಯ ಸಫಲತೆ ಆಯಾ ದೇಶದ ವಾಯುಗುಣವನ್ನು ಅವಲಂಬಿಸಿದೆ. ನೀರನ್ನು ಬಸಿದ ಬಳಿಕ ಫಲವತ್ತಾದ ಮಣ್ಣಿನ ಭೂಮಿ ದೊರಕುವುದಾದರೆ ಮಾತ್ರ ವ್ಯಾವಸಾಯಿಕ ಯಾಂತ್ರಿಕ ಮತ್ತು ಆರ್ಥಿಕ ಪರಿಶೀಲನೆಗಳನ್ನು ನಡೆಸಬಹುದು. ಜೌಗುನೆಲದಿಂದ ನೀರನ್ನು ಎಷ್ಟೊ ವರ್ಷಗಳ ಹಿಂದೆ ತೆಗೆದ ಪ್ರದೇಶಗಳಲ್ಲಿಯೂ ಭೂಗುಣವನ್ನು ಅಭಿವೃದ್ಧಿ ಪಡಿಸಿ ಬೆಳೆಯನ್ನು ಈಗಲೂ ಹೆಚ್ಚಿಸಲಾಗುತ್ತಿದೆ. ಜೌಗುನೆಲದಿಂದ ಕಡಿಮೆ ಖರ್ಚಿನಲ್ಲಿ ನೀರನ್ನು ತೆಗೆಯಬೇಕಾದರೆ ತಗ್ಗಾದ ಹಳ್ಳದ ಎರಡು ದಡಗಳಲ್ಲಿಯೂ ಏರಿಗಳನ್ನು ಕಟ್ಟಬೇಕು. ಮರಳು ಮಿಶ್ರವಾದ ಮಣ್ಣಿನಿಂದ ಇವನ್ನು ಕಟ್ಟಿದರೆ ಏರಿಯ ಮೇಲು ಭಾಗದಲ್ಲಿ ಜಿಗುಟಾದ ಮಣ್ಣನ್ನು ಹಾಕಿ ಅದು ಕೊರೆಯದ ಹಾಗೆ ನೋಡಿಕೊಳ್ಳಬೇಕು. ಈ ಯೋಜನೆಯಲ್ಲಿ ಅಲ್ಲಲ್ಲಿ ಪಂಪುಗಳನ್ನಿರಿಸಿ ಹೆಚ್ಚಾದ ನೀರನ್ನು ಎತ್ತಿ ಹಳ್ಳಕ್ಕೆ ಬಿಡಬೇಕಾಗುತ್ತದೆ. ಕೆಲವು ವೇಳೆ ಸರೋವರಗಳ ನೀರಿನ ಮಟ್ಟವನ್ನು ತಗ್ಗಿಸುವುದರಿಂದಲೂ ಉತ್ಕøಷ್ಟವಾದ ಭೂಮಿಯನ್ನು ಉದ್ಧಾರಮಾಡಬಹುದು. ಉಷ್ಣದೇಶಗಳಲ್ಲಿ ಮಲೇರಿಯದ ಹಾವಳಿಯಿಂದ ಒಳ್ಳೆಯ ಭೂಮಿಯಲ್ಲಿ ಯಾರೂ ಬಾಳುವುದು ಸಾಧ್ಯವಾಗದೆ ಇರಬಹುದು. ಸರೋವರದ ನೀರನ್ನು ಕಾಲುವೆಯ ಮೂಲಕ ಸಾಗಿಸುವುದರಿಂದ ಈ ತೊಂದರೆಯ ನಿವಾರಣೆ ಸಾಧ್ಯ.

	ಹೊಳೆಗಳ ದಾರಿ ತಿದ್ದಿ ಜೌಗು ನೆಲವನ್ನು ಸುಧಾರಿಸಬಹುದು. ತಿರುವುಗಳನ್ನು ನೇರವಾಗಿ ಮಾಡಿ ಹೊಳೆಯ ಪಾತ್ರವನ್ನು ಅಗಲವಾಗಿಯೂ ಹೊಸಗುಂಡಿಗಳನ್ನು ತೆಗೆದು ಆಳವಾಗಿಯೂ ಮಾಡುವುದು ಒಂದು ವಿಧಾನ. ಈ ವಿಧಾನದಲ್ಲಿನ ಅಪಾಯವೆಂದರೆ ಹೊಳೆಯಲ್ಲಿ ಸಾಗಿಬರುವ ಗೋಡು ಮಣ್ಣಿನ ತೂಕ ತಪ್ಪಬಹುದು. ಆಗ ನದಿಯ ಆಳ ಮತ್ತಷ್ಟು ಹೆಚ್ಚಿ ಕೊರೆಯಬಹುದು. ಇದನ್ನು ತಪ್ಪಿಸುವುದಕ್ಕಾಗಿ ಹೊಳೆ ಹರಿಯುವ ನಾಲೆಯನ್ನು ಅಗಲ ಮಾಡಬೇಕು. ಇಲ್ಲವೆ ಬೇಕಾದಾಗ ತೆರೆಯಬಹುದಾದ ಕಟ್ಟೆಗಳನ್ನು ಅಡ್ಡಕಟ್ಟಬೇಕು. ನದೀ ಮುಖದಲ್ಲಿ ತಗ್ಗಾದ ಭೂಮಿಯಿಂದಲೂ ಸರೋವರಗಳಿಂದಲೂ ಪಂಪುಮಾಡಿ ನೀರನ್ನು ತೆಗೆಯಬಹುದು. ಹೊಳೆಯ ತಳದಿಂದ ತೆಗೆದ ಮಣ್ಣನ್ನು ದಡಗಳ ಬಡಾವಣೆಗೆ ಅಗಲವಾಗಿ ತುಂಬಬಹುದು. ಹೊಳೆಯಲ್ಲಿ ಗೋಡುಮಣ್ಣು ವಿಶೇಷವಾಗಿ ಸಾಗಿಬರುವ ಕಡೆಗಳಲ್ಲಿ ಕೊಲ್ಲಿಗಳನ್ನೂ ನೀರಿನ ಕಾಲುವೆಗಳನ್ನೂ ಇದರಿಂದ ಮುಚ್ಚಬಹುದು. ಒಳಕ್ಕೆ ಚಾಚಿರುವ ದಡಗಳಿಂದ ಕೊರೆದ ಮಣ್ಣನ್ನು ಹೀಗೆ ಕೊಲ್ಲಿಗಳಲ್ಲಿ ತುಂಬಬಹುದು.

	ಸರೋವರದಿಂದ ನೀರನ್ನು ಎತ್ತುವುದಕ್ಕೆ ಮುಂಚೆ ಅದರ ಸುತ್ತ ಉಂಗುರಾಕಾರದ ಏರಿಯನ್ನು ಕಟ್ಟಿ ಮತ್ತೆ ಅದರ ಆಚೆಗೆ ಉಂಗುರಾಕಾರದ ಕಾಲುವೆಯನ್ನು ತೋಡಬೇಕು. ಸರೋವರದಿಂದ ಪಂಪುಮಾಡಿದ ನೀರು ಈ ಕಾಲುವೆಯೊಳಕ್ಕೆ ಬೀಳುತ್ತದೆ. ಇದರಲ್ಲಿ ಘಟ್ಟದಲ್ಲಿ ಸರೋವರದ ಮಧ್ಯದಲ್ಲಿ ಹೂಳು ಮಣ್ಣನ್ನು ಯಂತ್ರಗಳಿಂದ ಕೆರೆದು ತೆಗೆದು ಆಳವಾದ ಕಾಲುವೆಯಿಂದ ಪಂಪುಗಳ ಮೂಲಕ ನೀರನ್ನೆತ್ತಬೇಕು.

	ಮರಗಳನ್ನು ನೆಡುವುದು: ದಡ ಕೊರೆದು ಹೋಗದ ಹಾಗೆ ಬೇರುಗಳಿಂದ ಭೂಮಿಯನ್ನು ಕಚ್ಚಿ ಹಿಡಿಯುವ ವಿಶಿಷ್ಟ ರೀತಿಯ ಮರಗಳನ್ನು ನೆಡಲಾಗುತ್ತದೆ. ಆದರೆ ಅಲೆಗಳೂ ಪ್ರವಾಹಗಳೂ ಬಲವಾಗಿರುವ ಕಡೆ ಮರಗಳು ಬೆಳೆಯುವುದಿಲ್ಲ. ಅಂಥ ಕಡೆಗಳಲ್ಲಿ ಸಣ್ಣ ಮರದ ಕೊಂಬೆಗಳ ಬೇಲಿಯನ್ನೊ ಮಣ್ಣಿನಿಂದ ಅಥವಾ ಕಲ್ಲಿನಿಂದ ತುಂಬಿದ ಮರದ ಅಥವಾ ಬಿದಿರಿನ ಚಾಪೆಯನ್ನೋ ಹೊಳೆಗೆ ಅಡ್ಡವಾಗಿ ಇಡಬಹುದು. ಎತ್ತರವಾದ ಮರಳು ದಿಬ್ಬಗಳ ಮೇಲೆ ಗಿಡಗಳನ್ನು ನೆಡಬಹುದು. ಈ ಕೆಲಸಕ್ಕೆ ಉದ್ದವಾದ ಅಡ್ಡ ಕಟ್ಟೆಗಳನ್ನು ಹಾಕಬಹುದು. ಆಗ ಶಿಲುಬೆಯ ಆಕಾರದ ಕಟ್ಟೆಗಳ ಸುತ್ತಲೂ ಮಣ್ಣು ತುಂಬಿಕೊಂಡು ಗಿಡಗಳು ಬೆಳೆಯಲು ಆಸ್ಪದವಾಗುತ್ತದೆ. ಆಮೇಲೆ ಈ ಕಟ್ಟೆಗಳನ್ನು ಅಗಲವಾಗಿಸಬಹುದು. ಕುರುಚಲು ಗಿಡಗಳನ್ನೂ, ಪೊದೆಗಳನ್ನೂ ಈ ಕೆಲಸಕ್ಕೆ ವಿಶೇಷವಾಗಿ ಉಪಯೋಗಿಸುತ್ತಾರೆ. ಏಕೆಂದರೆ ಇವು ನೀರಿನಲ್ಲಿ ಕೊರೆದು ಹೋಗುವುದಿಲ್ಲ. ಪ್ರವಾಹಗಳಲ್ಲಿ ಇವಕ್ಕೆ ತೊಂದರೆಯಾದರೆ ಗಿಡಗಳನ್ನು ಪ್ರವಾಹದ ದಿಕ್ಕಿನಲ್ಲಿಯೇ ನೆಟ್ಟರೆ ನಿಲ್ಲುತ್ತವೆ. ಕೆಲವು ವೇಳೆ ಪ್ರವಾಹಕ್ಕೆ ಅಡ್ಡವಾಗಿಯೂ ಗಿಡಗಳನ್ನು ನೆಡುವುದುಂಟು. ಆಗ ಅವು ಮೆಕ್ಕಲುಮಣ್ಣನ್ನು ತಡೆಯುತ್ತವೆ. ಉಬ್ಬರವಿಳಿತದ ಪ್ರಭಾವಕ್ಕೆ ಸಿಕ್ಕಿದ ನಾಲೆಯನ್ನು ಆಳ ಮಾಡಬೇಕಾದಾಗ ಮಿಕ್ಕ ನಾಲೆಗಳಲ್ಲಿ ಹೂಳುಮಣ್ಣು ತುಂಬಬಹುದು. ಪ್ರಧಾನ ನಾಲೆಯನ್ನು ಆಳವಾಗಿ ಮಾಡಿ ಅಗಲವಾದವನ್ನು ಕಿರಿದಾಗಿಸಿ ಮರಳಿನ ದಡಗಳನ್ನು ಎತ್ತರಿಸಿ ಗಿಡಗಳನ್ನು ನೆಡಬಹುದು. ದೊಡ್ಡನದಿಯ ಅಳಿವೆಯ ಒಳಭಾಗಗಳಲ್ಲಿ ದಾರಿಯನ್ನು ಹಾಕಿದರೆ ಬರತದ ನೀರು ಕೊಂಚ ಕಡಿಮೆಯಾಗುತ್ತದೆ. ಅಳಿವೆಯ ಕೊನೆಯಲ್ಲಿ ನದಿಯೇ ಕಿರಿದಾಗುತ್ತದೆ. ಹಿಂದುಗಡೆ ಇನ್ನೂ ಕಿರಿದಾಗಬಹುದು. ಆಳಿವೆ ಉದ್ದವಾಗಿದ್ದರೆ ದಡದಲ್ಲಿ ಮೆಕ್ಕಲುಮಣ್ಣು ತುಂಬುತ್ತದೆ. ಕೆಲವು ವೇಳೆ ಒಂದು ರಸ್ತೆಯೋ ರೈಲುದಾರಿಯೋ ಅಗಲವಾದ ಉಬ್ಬರದ ನಾಲೆಯನ್ನು ದಾಟಬೇಕಾಗುತ್ತದೆ. ಆಗ ಒಂದು ಕಟ್ಟೆಯನ್ನು ಅಡ್ಡಹಾಕುತ್ತಾರೆ. ಅದರಿಂದ ನಾಲೆಯಲ್ಲಿ ಹೂಳುಮಣ್ಣು ತುಂಬಿಕೊಳ್ಳುತ್ತದೆ.

	ಮೆಕ್ಕಲುಮಣ್ಣಿನ ಅಗಳುಗಳು: ಗಿಡಗಳನ್ನು ನೆಡಲಾರದಷ್ಟು ಉಗ್ರವಾದ ಅಲೆಗಳ ಹೊಡೆತವಿರುವ ಚಪ್ಪಟೆಯಾದ ಸಮುದ್ರ ತೀರಗಳಲ್ಲಿ ಕುರುಚಲು ಗಿಡಗಳೂ ಪೊದೆಗಳೂ ಇಲ್ಲದೆ ಹೋದಾಗ ನಡುವೆ ಸ್ಥಳವನ್ನು ಬಿಟ್ಟು ಜೋಡಿಸಿದ ಚೌಕಟ್ಟಿನ ಆಕಾರದಲ್ಲಿ 6 ಮೀ ಅಂತರದಲ್ಲಿ 30 ಸೆಂಮೀ ಆಳದ ಸಣ್ಣ ಅಗಳುಗಳನ್ನು ಅಗೆಯುತ್ತಾರೆ. ಕ್ರಮೇಣ ಈ ಗುಂಡಿಗಳಲ್ಲಿ ಮೆಕ್ಕಲುಮಣ್ಣು ತುಂಬಿಕೊಳ್ಳುತ್ತದೆ. ಆಗ ಮತ್ತೆ ಅಗಳುಗಳನ್ನು ತೋಡಬೇಕಾಗುತ್ತದೆ. ಅಗೆದ ಮಣ್ಣನ್ನು ಎರಡು ಅಗಳುಗಳ ನಡುವೆ ಹಾಕಿದಾಗ ಏರಿಗಳು ಎತ್ತರವಾಗುತ್ತ ಹೋಗುತ್ತವೆ. ಇವುಗಳ ಮೇಲೆ ಗಿಡಗಳನ್ನು ನೆಡಬಹುದು. ಹೀಗೆ ಒಂದು ಅಡ್ಡಗಟ್ಟಿನಿಂದ ಸುತ್ತುವಷ್ಟು ಭೂಮಿ ದೊರೆಯುವ ವರೆಗೂ ಅಗಳುಗಳನ್ನು ಮತ್ತೆ ಮತ್ತೆ ತೋಡುತ್ತ ಹೋಗುತ್ತಾರೆ. ಅನೇಕವೇಳೆ ಈ ಪಾತಿಗಳು ಎತ್ತರವಾದ ಉಬ್ಬರದ ಮಟ್ಟಕ್ಕಿಂತಲೂ ಸುಮಾರು 30 ಸೆಂಮೀ ಎತ್ತರವಾಗುತ್ತವೆ. ಎಷ್ಟೊ ಶತಮಾನಗಳಿಂದ ಹಾಲೆಂಡಿನ ವ್ಯಾಡನ್ ತೀರದಲ್ಲಿ ಮತ್ತು ಜರ್ಮನಿಯಲ್ಲಿ ಈ ರೀತಿಯಿಂದ ಫಲವತ್ತಾದ ಭೂಮಿಯನ್ನು ಸಂಪಾದಿಸಿದ್ದಾರೆ. ಆದರೂ ಈ ನೆಲಕ್ಕೆ ಹೊಸದಾಗಿ ಗೊಬ್ಬರ ಹಾಕಿ ಪೈರು ಚೆನ್ನಾಗಿ ಬೆಳೆಯುವ ಹಾಗೆ ಮಾಡಬೇಕಾಗುತ್ತದೆ.

	ಆರ್ಥಿಕ ಮತ್ತು ಇತರ ದೃಷ್ಟಿಕೋನಗಳು: ಫಲವತ್ತಾದ ಒಂದು ಹೊಸ ಪಾತಿಯನ್ನು ಕಟ್ಟಬೇಕಾದರೆ ಯೋಜನೆಯ ಅನೇಕ ಹಂತಗಳಲ್ಲಿ ತಜ್ಞರ ಪರಿಶೀಲನೆ ಅವಶ್ಯ. ಮೊದಲು ಸುತ್ತಮುತ್ತಲಿನ ಭೂಮಿಯ ಮೋಜಣಿ ಮಾಡಬೇಕು. ಸಮುದ್ರತೀರದಲ್ಲಿ ಮೊದಲಿನಿಂದಲೂ ನೆಲೆಸಿರುವ ಬೆಸ್ತರ ಕುಟುಂಬಗಳು ಎಲ್ಲಿಗೆ ಹೋಗಬೇಕು? ಅವರು ಬೇಸಾಯ ಗಾರರಾಗಬೇಕೆ? ಅಲ್ಲಿ ಇದ್ದ ಪ್ರಾಣಿವರ್ಗದ ಗತಿಯೇನು? ಈ ಹೊಸ ಪಾತಿಗಳಿಂದ ಹವಾಮಾನದ ಮೇಲೆ ಏನಾದರೂ ಪರಿಣಾಮವಾಗಬಹುದೆ? ಜಿನುಗಿ ಬರುವ ಉಪ್ಪಿನಿಂದ ಈ ಹೊಸಪಾತಿಗಳಿಗೆ ಅಪಾಯ ಹೆಚು.್ಚ ಸಮುದ್ರತೀರಕ್ಕೆ ಹಡಗುಗಳು ಬಂದಾಗಲೂ ಉಪ್ಪು ಒಳಗೆ ಬರಬಹುದು. ಉಪ್ಪುನೀರು ಸಿಹಿನೀರಿಗಿಂತ ಭಾರವಾಗಿರುವುದರಿಂದ ಮೇಲೆ ಸಿಹಿನೀರನ್ನು ಬಿಟ್ಟರೂ ತಳದ ನೀರಿನ ಉಪ್ಪು ಹಾಗೆಯೇ ಇರುತ್ತದೆ. ಸಾಲದ್ದಕ್ಕೆ ತಳದ ನೀರನ್ನು ಚರಂಡಿಗಳಿಂದ ತೆಗೆದಾಗ ನೆಲ ತಗ್ಗಬಹುದು. ಹೀಗೆ ಕೆಲವು ಕಡೆ ಭೂಮಿ 1.8 ಮೀ. ನಷ್ಟು ಕೆಳಗೆ ಇಳಿದಿದೆ. ಒಂದು ಶತಮಾನದ ಹಿಂದೆ ಸರ್ಕಾರವೇ ಈ ಕೆಲಸ ಮಾಡಿದಾಗ ಹೊಸ ಹೊಸ ಭೂಮಿಯಲ್ಲಿ ಜನ ನೆಲಸುವುದಕ್ಕೆ ಎಷ್ಟು ದೂರದೃಷ್ಟಿಯಿಂದ ಅನುಕೂಲತೆಗಳನ್ನು ಕಲ್ಪಿಸಬೇಕೆಂಬುದು ತಿಳಿದಿರಲಿಲ್ಲ. ಹೊಸದಾಗಿ ವಲಸೆಹೋದ ಜನಕ್ಕೆ ಮನೆಗಳು, ರಸ್ತೆಗಳು, ಶಾಲೆಗಳು, ಆಸ್ಪತ್ರೆಗಳು ಮನೋರಂಜನೆಗೆ ಅವಕಾಶಗಳು ಇಲ್ಲದೆ ಒಂದೆರಡು ತಲೆಮಾರಿನತನಕ ಅವರು ಪಾಡುಪಟ್ಟರು.

	ಹಾಲೆಂಡಿನ ಝೈಡರ್ ಝೀಪ್ರದೇಶದಲ್ಲಿ 1921ರಲ್ಲಿ 2,22,750 ಹೆಕ್ಟೇರುಗಳನ್ನು ವಿಶಾಲ ತತ್ತ್ವಗಳ ಆಧಾರದ ಮೇಲೆ ಕೃಷಿಯೋಗ್ಯವಾಗಿ ಮಾಡಿದಾಗ ಖಾಸಗಿ ಜನರ ಕೈಯಲ್ಲಿ ಲಾಭಕ್ಕಾಗಿ ಈ ಯೋಜನೆಯನ್ನು ಬಿಡದೆ ಸರ್ಕಾರವೇ ಆ ಪ್ರದೇಶ ಬೆಳಸಬೇಕೆಂಬ ದೃಷ್ಟಿಯಿಂದ ಬೇಕಾದ ಅನುಕೂಲತೆಗಳನ್ನೆಲ್ಲ ಒದಗಿಸಿತು. ಇಂಥ ಉದ್ಯಮಗಳಿಂದ ತಕ್ಷಣ ಲಾಭ ಬರುವುದಿಲ್ಲ. ಸಹನೆಯಿಂದ ಎಷ್ಟೊ ವರ್ಷಗಳ ಕಾಲ ಅವಿರತವಾಗಿ ದುಡಿದರೆ ದೇಶಕ್ಕೆ ಉಪಕಾರವಾಗುತ್ತದೆ.

	ಆಡಳಿತ: ಯೂರೊಪಿನಲ್ಲಿ ಭೂಮಿಯನ್ನು ಹೊಸದಾಗಿ ಕೃಷಿಯೋಗ್ಯವಾಗಿಸುವುದು ಮತ್ತು ಅದನ್ನು ಅಭಿವೃದ್ಧಿಗೊಳಿಸುವುದು ನೆಪೋಲಿಯನ್ನನ ಕಾಲದ ತನಕವೂ ಸರ್ಕಾರದ ವ್ಯವಸ್ಥೆಗೆ ಒಳಪಡದ್ದರಿಂದ ಕ್ರಮವಾಗಿ ಬೆಳೆಯಲಿಲ್ಲ. ಇಂಗ್ಲೆಂಡಿನಲ್ಲಿ 1878ರಲ್ಲಿ ಒಂದೊಂದು ಹೊಳೆಯ ಪಾತ್ರವನ್ನು ಅಭಿವೃದ್ಧಿ ಮಾಡುವುದಕ್ಕೂ ಸರ್ಕಾರದ ಪ್ರತ್ಯೇಕ ಇಲಾಖೆಗಳು ಪ್ರಾರಂಭವಾದುವು. ಆ ದೇಶದಲ್ಲಿ ಸಲಹೆಗಳನ್ನು ಕೊಡಲು ಏರ್ಪಡಿಸಿದ ಸಮಿತಿ 1943ರಲ್ಲಿ ಸಲ್ಲಿಸಿದ ವರದಿ ಬೇರೆ ಬೇರೆ ನದೀಪಾತ್ರಗಳನ್ನು ಸಮೀಕರಣಮಾಡಲು ಒಂದೇ ಆಡಳಿತವಿಲ್ಲದ್ದು ಪ್ರಗತಿಗೆ ಬಾಧಕವೆಂದಿತು. ನಂತರ ಸಮೀಕರಣ ಸಮಿತಿಗಳ ನೇಮಕದಿಂದ ತುಂಬಾ ಅನುಕೂಲವಾಗಿತ್ತು.

	ಮುಂದಿನ ಬೆಳೆವಣಿಗೆ: ಆಧುನಿಕ ವಿಜ್ಞಾನ ಮತ್ತು ತಂತಜ್ಞಾನದ ಬೆಳವಣಿಗೆಗಳಿಂದ ಭೂಮಿಯನ್ನು ಹೆಚ್ಚು ಫಲವತ್ತಾಗಿ ಮತ್ತು ಜನಜೀವನಕ್ಕೆ ಯೋಗ್ಯವಾಗಿ ಮಾಡುವ ಕೆಲಸ ಎಲ್ಲ ಕಡೆಯಲ್ಲಿ ಮುಂದುವರಿದಿದೆ. ಎಲ್ಲ ಜಮೀನಿಗೂ ನಾಲೆಯಿಂದ ನೀರು ತರಲು ಸಾಧ್ಯವಾಗದು. ಅಂಥ ಕಡೆಗಳಲ್ಲಿ ವಿದ್ಯುತ್ ಪಂಪ್ ಬಳಸಿ ತಗ್ಗಾದ ಹೊಳೆಗಳಿಂದ ನೀರನ್ನು ಎತ್ತಿ ಸೀಳುನಾಲೆಗಳ ಮೂಲಕ ಗದ್ದೆಗಳಿಗೂ ಹೊಲಗಳಿಗೂ ಬಿಡಬೇಕಾಗುತ್ತದೆ. ಮೆಕ್ಕಲುಮಣ್ಣನ್ನು ನೆಲದಲ್ಲಿ ತುಂಬುವ ಗಿಡಗಳನ್ನು ಸಾಧ್ಯವಾದ ಕಡೆಗಳಲ್ಲಿ ಬೆಳೆಸಬೇಕು. ಆದರೆ ಈ ಕೆಲಸ ನಿಧಾನವಾಗುತ್ತಿದೆ. ಹಾಲೆಂಡಿನಲ್ಲಿ ಝೈಡರ್ ಝೀ ಯೋಜನೆ 1975ರ ಸುಮಾರಿಗೆ ಮುಗಿದ ಮೇಲೂ ಹೊಸದಾಗಿ ಕೃಷಿಯೋಗ್ಯವಾಗಿಸ ಬೇಕಿರುವ ಜಮೀನು ಯಥೇಚ್ಛವಾಗಿದೆ. ನೆಲದ ಮೇಲೆ ಮೆಕ್ಕಲು ಮಣ್ಣು ನಿಂತು ಫಲವತ್ತಾಗುವ ಹಾಗೆ ಮಾಡಿ ಪಂಪುಗಳಿಂದ ಬೇಸಾಯಕ್ಕೆ ನೀರನ್ನು ಒದಗಿಸಬೇಕಾಗುತ್ತದೆ. ಕೆಲವು ಕಡೆ ನೆಲದ ಕೆಳಗೆ ಆಳದಲ್ಲಿರುವ ಜೇಡಿಮಣ್ಣನ್ನು ತೋಡಿ ತೆಗೆದು ಮೇಲಿನ ಮರಳಿನ ಮೇಲೆ ಹರಡಿ ಪೈರು ಬೆಳೆಯುವ ಹಾಗೆ ಮಾಡಬೇಕಾಗಬಹುದು. ಇನ್ನೊಂದು ಕ್ರಮದಲ್ಲಿ ಮರಳು ದಿಣ್ಣೆಗಳ ಕೆಳಗಡೆ ಏರಿ ಹಾಕಿ ಅದರಲ್ಲಿ ಒಂದು ಕಂಡಿಯನ್ನು ಬಿಟ್ಟು ಉಬ್ಬರದ ಕಾಲದಲ್ಲಿ ಬರುವ ಮೆಕ್ಕಲುಮಣ್ಣು ಕಂಡಿಯಿಂದ ಒಳಕ್ಕೆ ಬಂದು ಸಾಕಷ್ಟು ದಪ್ಪವಾಗಿ ನಿಂತ ಮೇಲೆ ಕಂಡಿಯನ್ನು ಮುಚ್ಚುತ್ತಾರೆ.		
		(ಎಚ್.ಸಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ